ಕಲಿಕೆಗೆ ಸಮಯವಿಲ್ಲ!! ಸೇವಾ ಸಂಸ್ಥೆಗಳು ಸಾಮರ್ಥ್ಯ ನಿರ್ಮಾಣಕ್ಕೆ ಏಕೆ ಆದ್ಯತೆ ನೀಡಬೇಕು?

ಇತ್ತೀಚೆಗೆ ಬೆಂಗಳೂರಿನ ಒಂದು ಸೇವಾ ಸಂಸ್ಥೆಯೊಂದಿಗೆ ಮಾತನಾಡುತ್ತಿರಬೇಕಾದರೆ ಆ ಸಂಸ್ಥೆಯನ್ನು ನಡೆಸುವವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
● “ನಾವು ಅನೇಕ ವರ್ಷಗಳಿಂದ ಮಾಡುತ್ತಿದ್ದ ಸೇವಾ ಚಟುವಟಿಕೆ ಬದಲಾದ ಈ ಸನ್ನಿವೇಶದಲ್ಲಿ ಈಗ ಪ್ರಸ್ತುತವಲ್ಲವೇನೋ ಎನಿಸುತ್ತಿದೆ. ಆದರೆ ಬೇರೇನು ಮಾಡಬೇಕು ಎಂದು ತಿಳಿಯುತ್ತಿಲ್ಲ.”
● “ನಾವು ಅನೇಕ ವರ್ಷಗಳಿಂದ ಚಟುವಟಿಕೆ ನಡೆಸುತ್ತಿದ್ದೇವೆ, ಆದರೆ ನಮ್ಮ ಸಂಸ್ಥೆಯ ಬೆಳವಣಿಗೆ ಸೀಮಿತವಾಗಿದೆ. ಈಗೀಗ ಪ್ರಾರಂಭವಾಗಿರುವ ಕೆಲವು ಸಂಸ್ಥೆಗಳ ಬೆಳವಣಿಗೆ ಮತ್ತು ಅವು ಮಾಡುತ್ತಿರುವ ಕಾರ್ಯದ ಪ್ರಭಾವ ನೋಡಿದಾಗ ಆಶ್ಚರ್ಯವಾಗುತ್ತದೆ.”
● “ನಾವೂ ಕೂಡ ತುಂಬಾ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇವೆ, ಆದರೆ ನಾವು ಅದರ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿಸುವ ಪ್ರಯತ್ನ ಮಾಡಿಲ್ಲ.”
● “ನಮ್ಮ ಸಂಸ್ಥೆಯಲ್ಲಿ ಕ್ಷಮತೆಯುಳ್ಳ ವ್ಯಕ್ತಿಗಳ ಕೊರತೆ ಇದೆ. ಹೊಸದಾಗಿ ಏನಾದರೂ ಮಾಡುವ ಬಗ್ಗೆ ಅವರಿಗೆ ಅಷ್ಟಾಗಿ ಆಸಕ್ತಿ ಇಲ್ಲ.”
● “ನಾವು ಏನೇ ಮಾಡಬೇಕೆಂದರೂ ಸಂಪನ್ಮೂಲದ ಕೊರತೆಯಿಂದಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಯಾರನ್ನು ಸಂಪರ್ಕಿಸಬೇಕು ಎಂದು ಗೊತ್ತಿಲ್ಲ. ಈ ಬಗ್ಗೆ ನೀವೇನಾದರೂ ಸಹಾಯ ಮಾಡಲು ಸಾಧ್ಯವೇ?”
ನಾನು ಅವರಿಗೆ “ಪ್ರಕರ್ಷ ಅಕಾಡೆಮಿ” ನಡೆಸುತ್ತಿರುವ “ಆರೋಹಣಂ” ಕಾರ್ಯಕ್ರಮದ ಬಗ್ಗೆ ವಿವರಿಸಿ ಹೇಗೆ ಈ ಪ್ರಶಿಕ್ಷಣ ಅವರ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಬಹುದು ಎನ್ನುವುದನ್ನು ತಿಳಿಸಿದೆ. ಅವರು “ತುಂಬಾ ಒಳ್ಳೆಯ ಕಾರ್ಯಕ್ರಮ. ನಾನು ಅದರ ಬಗ್ಗೆ ಆಲೋಚಿಸಿ ತಿಳಿಸುತ್ತೇನೆ.” ಎಂದರು. “ಹೌದು, ನಮಗೆ ಇಷ್ಟವಿದೆ, ಆದರೆ…” ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ನಾವು ಸೇವಾಸಂಸ್ಥೆಗಳ ಜೊತೆ ಮಾತನಾಡಿದಾಗ ನಾವು ಪಡೆಯುವ ಸಾಮಾನ್ಯ ಪ್ರತಿಕ್ರಿಯೆ ಇದು.
ಸಂಸ್ಥೆಗಳು ಎದುರಿ/ಸುತ್ತಿರುವ ಸವಾಲುಗಳು
ಇತ್ತೀಚೆಗೆ ನಾವು ಸಂಪರ್ಕ ಮಾಡಿದ ಸೇವಾಸಂಸ್ಥೆಗಳ ಉತ್ತರಗಳ ಸ್ವರೂಪ ನೋಡಿದಾಗ ಪ್ರಮುಖವಾಗಿ ಎದುರಿಸುತ್ತಿರುವ ಸವಾಲುಗಳ ಚಿತ್ರ ಕಣ್ಮುಂದೆ ಬರುತ್ತದೆ:
- “ನಾವು ಅನೇಕ ವರ್ಷಗಳಿಂದ ಹೇಗೂ ಈ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಹೊಸದಾಗಿ ಇನ್ನೇನು ಮಾಡುವ ಅವಶ್ಯಕತೆ ಇದೆ?”
- “ನಮ್ಮ ಕಾರ್ಯ ಚಟುವಟಿಕೆಗಳು ತುಂಬಾ ಸೀಮಿತವಾಗಿವೆ, ಹಾಗಾಗಿ ಈ ರೀತಿಯ ಪ್ರಶಿಕ್ಷಣ ನಮಗೆ ಬೇಕಿಲ್ಲ.”
- “ನಾವು ಒಂದು ಸಣ್ಣ ತಂಡ, ನಮ್ಮ ಸಿಬ್ಬಂದಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಪ್ರಶಿಕ್ಷಣಕ್ಕೆ ಸಮಯ ಕೊಡಲು ಸಾಧ್ಯವಿಲ್ಲ.”
- “ನಾವು ಭಾಗವಹಿಸಲು ಇಷ್ಟಪಡುತ್ತೇವೆ, ಆದರೆ ನಾವು ಪ್ರಶಿಕ್ಷಣಕ್ಕೆ ಬೇಕಾದ ಶುಲ್ಕವನ್ನು ಕಟ್ಟಲು ಸಾಧ್ಯವಿಲ್ಲ.”
- “ಸದ್ಯಕ್ಕೆ ಪ್ರಶಿಕ್ಷಣ ನಮ್ಮ ಆದ್ಯತೆ ಅಲ್ಲ.” “ಪ್ರಶಿಕ್ಷಣ ಪಡೆದ ಸಿಬ್ಬಂದಿ ಸಂಸ್ಥೆಯನ್ನು ಬಿಟ್ಟು ಹೋಗುತ್ತಾರೆ.”
- “ನಮ್ಮ ಸಂಸ್ಥೆಯ ಮೇಲಾಧಿಕಾರಿಗಳಿಗೆ ತಮ್ಮ ಸಿಬ್ಬಂದಿಗಳ ಪ್ರಶಿಕ್ಷಣ ನೀಡುವುದರ ಬಗ್ಗೆ ಇನ್ನೂ ಮನವರಿಕೆಯಾಗಿಲ್ಲ.”
- “ನಮ್ಮ ಸಂಸ್ಥೆಗೆ ಸಂಪನ್ಮೂಲದ ಅವಶ್ಯಕತೆ ಇದೆ. ಕ್ಷಮತೆ ಇರುವ ವ್ಯಕ್ತಿ ನಮ್ಮಲ್ಲಿಲ್ಲ?”
- “ನಮ್ಮ ಸಂಸ್ಥೆಯಲ್ಲಿ ಮಹಿಳಾ ಸ್ವಾವಲಂಬನೆಗೆ ಬೇಕಾದ ಎಲ್ಲ ರೀತಿಯ ಪ್ರಶಿಕ್ಷಣದ ವ್ಯವಸ್ಥೆ ಇದೆ, ಆದರೆ ಈ ಪ್ರಕಲ್ಪವನ್ನು ನಡೆಸುವ ಯೋಗ್ಯ ವ್ಯಕ್ತಿಗಳಿಲ್ಲ.”
ಇದು ಖಂಡಿತ ವಸ್ತುಸ್ಥಿತಿ ಹೌದು ಮತ್ತು ಇವೆಲ್ಲವೂ ಸೇವಾಸಂಸ್ಥೆಗಳು ಎದುರಿಸುತ್ತಿರುವ ನಿಜವಾದ ಸವಾಲುಗಳು. ಆದರೆ ಈ ಕಾರಣಗಳೇ ತರಬೇತಿ ಏಕೆ ಅವಶ್ಯಕವಾಗಿ ಬೇಕು ಎಂದು ಸೂಚಿಸುತ್ತಿವೆ. ಅನೇಕ ಸಂಸ್ಥೆಗಳಿಗೆ ತಮ್ಮ ಧ್ಯೇಯೋದ್ದೇಶ ಮತ್ತು ಅದಕ್ಕಾಗಿ ಮಾಡಬೇಕಾದ ಚಟುವಟಿಕೆಗಳ ಸ್ಪಷ್ಟ ಕಲ್ಪನೆ ಇರುವುದಿಲ್ಲ. ತಾವು ನಡೆಸುವ ಚಟುವಟಿಕೆಗಳು ತಾವಿಟ್ಟುಕೊಂಡ ಉದ್ದೇಶಗಳ ಸಾಧನೆಗೆ ಪೂರಕವೇ ಎಂದು ಚಿಂತನೆ ಮಾಡಿರುವುದಿಲ್ಲ. ಹಾಗಾಗಿ ತಾವು ಮಾಡಿರುವ ಕಾರ್ಯದ ಪರಿಣಾಮ ಕೆಲವೇ ಉದಾಹರಣೆಗಳಿಗೆ ಸೀಮಿತ ವಾಗಿರುತ್ತದೆಯೇ ಹೊರತು ದೊಡ್ಡ ಪ್ರಮಾಣದ ಪರಿಣಾಮ ಸಾಧ್ಯವಾಗಿರುವುದಿಲ್ಲ. ಅನೇಕ ಬಾರಿ ತಾವಿಟ್ಟುಕೊಂಡ ಉದ್ದೇಶದ ಸಫಲತೆಗೆ ಅದಕ್ಕೆ ತಕ್ಕ ಪ್ರಮಾಣದ ಮತ್ತು ಸಾಮರ್ಥ್ಯವುಳ್ಳ ಮಾನವ ಸಂಪನ್ಮೂಲವನ್ನು ಜೋಡಿಸಿಕೊಳ್ಳಬೇಕಾಗುತ್ತದೆ.
ಪ್ರತಿಯೊಂದು ಸಂಸ್ಥೆಯೂ ಕಾಲಕ್ಕೆ ತಕ್ಕಂತೆ ಅವಲೋಕನ ಮಾಡಿಕೊಂಡು ಹೊಸ ರೀತಿಯ ಆಲೋಚನೆ ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕು. ಇಲ್ಲವಾದರೆ ಆ ಸಂಸ್ಥೆ ಬೆಳವಣಿಗೆ ಇಲ್ಲದೆ ನಿಂತ ನೀರಾಗುತ್ತದೆ. ಅನೇಕ ಬಾರಿ ಅದು ತಾನಿದ್ದ ಉತ್ತಮ ಸ್ಥಿತಿಯಿಂದ ಕೆಳಕ್ಕೂ ಸರಿಯಬಹುದು. ಯಾವುದೇ ಸಂಸ್ಥೆಯ ಸ್ಥಿತಿ ಮತ್ತು ಬೆಳವಣಿಗೆಗೆ ನಿರಂತರ ಕಲಿಕೆ ಅಗತ್ಯ. ಕಲಿಕೆ ಎನ್ನುವುದು ಖರ್ಚಿನ ಬಾಬತ್ತಲ್ಲ. ಅದು ನಮ್ಮ ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಮಾಡುವ ಹೂಡಿಕೆ. ಸಂಸ್ಥೆಯ ನಿಜವಾದ ಶಕ್ತಿ ಮಾನವ ಸಂಪನ್ಮೂಲ. ಹಾಗಾಗಿ ಸಿಬ್ಬಂದಿಗಳ ಬೆಳವಣಿಗೆಗೆ ನಿರಂತರವಾದ ಕಲಿಕೆಯ ಅಗತ್ಯ ಇದ್ದೇ ಇದೆ. ಸಮರ್ಥ ಸಿಬ್ಬಂದಿ ಇದ್ದರೆ ಸಂಸ್ಥೆಯ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬಹುದು. ಮತ್ತು ಕಾರ್ಯದ ವಿಸ್ತಾರಕ್ಕೆ ಕೂಡ ಸಿಬ್ಬಂದಿಯೇ ಆಧಾರ.
ಕನಿಷ್ಠ 3 ವರ್ಷಗಳಲ್ಲಿ ನಮ್ಮ ಸಂಸ್ಥೆ ಹೇಗಿರಬೇಕು ಎಂಬ ಚಿಂತನೆ ಮಾಡಬೇಕು. ಸಂಸ್ಥೆಯ ಸಾಮರ್ಥ್ಯ ಬೆಳೆಸುವ ಈ ದಿಕ್ಕಿನಲ್ಲಿ ಸಣ್ಣ ಹೆಜ್ಜೆಗಳನ್ನಿಡಲು ಪ್ರಾರಂಭಿಸಬೇಕು. ಆಗ ಕ್ರಮೇಣ ನಿಶ್ಚಯಿಸಿದ ರೀತಿಯಲ್ಲಿ ಕಾರ್ಯ ಮಾಡಲು ಮತ್ತು ಆ ದಿಕ್ಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.
Arohanam Application – Cohort 2025-26
By,
Sudarshan Swamy
Chief Learning Officer
Prakarsha Academy
